ಗುರಜಾಡ ಅಪ್ಪಾರಾವ್
	1861-1916. ಆಧುನಿಕ ತೆಲಗು ಸಾಹಿತ್ಯ ಆದ್ಯರಲ್ಲಿ ಒಬ್ಬ; ಕನ್ಯಾ ಶುಲ್ಕಂ ಎಂಬ ನಾಟಕದಿಂದ ಅಭೂತಪೂರ್ವವಾದ ಕೀರ್ತಿ ಪ್ರತಿಷ್ಠೆಗಳನ್ನು ಗಳಿಸಿಕೊಂಡವ. ಬಾಲ್ಯವಿವಾಹ, ಅದರಿಂದ ಒದಗಬಹುದಾದ ಬಾಲವಿಧವಾ ಸಮಸ್ಯೆ, ಕನ್ಯಾಶುಲ್ಕ, ಕನ್ಯಾಬಲಿ, ಗಂಡಸು ಹೆಂಗಸಿಗೆ ಮಾಡುವ ನಾನಾ ರೀತಿಯ ಮೋಸಗಳು - ಇವೆಲ್ಲದರ ಚಿತ್ರಗಳು ಈ ನಾಟಕದಲ್ಲಿ ಹೆಣೆದುಕೊಂಡು ಬರುತ್ತವೆ. ಅಂದು ಆ ಪ್ರಾಂತದಲ್ಲಿ ಹಬ್ಬಿದ್ದ ಸಾಂಘಿಕ ದುಷ್ಟಪದ್ಧತಿಗಳನ್ನು ಖಂಡಿಸುವುದಷ್ಟೇ ಈ ನಾಟಕದ ಮೂಲ ಉದ್ದೇಶವಾಗಿದ್ದರೂ ಅದು ಇನ್ನೂ ಹಲವು ಕಾರ್ಯಗಳನ್ನು ಸಾಧಿಸಿತು. ಈ ನಾಟಕ ಸಂಪೂರ್ಣವಾಗಿ ಗದ್ಯರೂಪಕ. ಇದರಲ್ಲಿ ಅಂದಿನ ತೆಲಗು ನಾಟಕಗಳಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದಂತೆ ಹಾಡುಗಳಿಲ್ಲ, ಪದಗಳೂ ಇಲ್ಲ, ಸಂಗೀತದ ನೆರವಿಲ್ಲದೆಯೇ ಇದು ಪಡೆದುಕೊಂಡ ಜನಪ್ರೀತಿ ಅಸಾಧಾರಣವಾದದ್ದು. ಅಷ್ಟೇ ಅಲ್ಲದೆ, ಇದರಲ್ಲಿ ಬಳಕೆಯಾಗಿರುವ ಗದ್ಯವಾದರೂ ಪಂಡಿತಜನರ ಮೆಚ್ಚಿಗೆಯನ್ನು ಗಳಿಸಬಹುದಾದ ಗ್ರಾಂಥಿಕ ಭಾಷೆಯದಲ್ಲ. ಗ್ರಾಂಥಿಕ ಭಾಷೆಗೂ ವ್ಯಾವಹಾರಿಕ ಭಾಷೆಗೂ ಅಂತರ ಯಾವ ಕಾಲದಲ್ಲಿಯೂ ಇರತಕ್ಕದ್ದೇ. ಆದರೆ ಅಂದು ತೆಲುಗಿನಲ್ಲಿ ಆ ಅಂತರ ಬಹಳ ತೀವ್ರವಾಗಿತ್ತು. ಅಪ್ಪಾರಾವ್ ತನ್ನ ಮೇರುಕೃತಿಯನ್ನು ಬಳಕೆಯ ತೆಲುಗಿನಲ್ಲಿಯೇ ರಚಿಸಿ ವ್ಯಾವಹಾರಿಕ ಭಾಷಾವಾದಿಗಳಲ್ಲಿ ಅಗ್ರಗಣ್ಯನಾದ. ಅಷ್ಟೇ ಅಲ್ಲ. ವ್ಯಾವಹಾರಿಕ ಭಾಷೆ ಕಾವ್ಯನಾಟಕಗಳಿಗೂ ಉಪಯುಕ್ತವಾದ ಭಾಷೆಯಾಗಬಲ್ಲದು ಎಂಬುದನ್ನು ಆತ ಪ್ರಯೋಗಿಸಿ ತೋರಿಸಿದ.

	ಕನ್ಯಾಶುಲ್ಕವಲ್ಲದೆ ಕೊಂಡುಭಟ್ಟೆಯಂ ಎಂಬ ಇನ್ನೊಂದು ನಾಟಕವನ್ನೂ ಅಪ್ಪಾರಾವ್ ರಚಿಸಿದ್ದಾನೆ. ಈ ಕೃತಿಗಳಲ್ಲಿ ಆತನ ಹಾಸ್ಯದ ವಿಶ್ವರೂಪವೇ ಪ್ರಕಟವಾಗಿದೆಯೆಂದು ಹೇಳಬಹುದು. ಹಾಸ್ಯರಸ ಈತನ ಸೊಮ್ಮು. ಈತ ಕಳಾಭಿಜ್ಞನಾದ ರಸವೇತ್ತ; ಮಾನಸಿಕ ವ್ಯಾಪಾರಗಳ ಮರ್ಮಗಳನ್ನು ಬಹಳ ಚೆನ್ನಾಗಿ ಅರಿತವನು. ಈತನ ವಿಡಂಬನ ಶೈಲಿ ನಿಜಕ್ಕೂ ಪ್ರಶಂಸಾರ್ಹವಾದುದು. 

	ಅಪ್ಪಾರಾವ್ ಜಾನಪದ ಗೀತೆಗಳ ಸ್ವಾರಸ್ಯವನ್ನು ಕಂಡುಕೊಂಡು ಅನುಭವಿಸಿ ಆನಂದಿಸಿದ ರಸಿಕ. ಆ ಗೇಯ ಕಾವ್ಯಗಳ ಧಾಟಿಯನ್ನೂ ನುಡಿಕಾರವನ್ನೂ ಮೆಚ್ಚಿ ಅವನ್ನು ತನ್ನ ಭಾವಗೀತೆಗಳಲ್ಲಿ ಅಳವಡಿಸಿಕೊಂಡಿದ್ದಾನೆ. ಮುತ್ಯಾಲ ಸರಾಲು (ಮುತ್ತಿನ ಸರಗಳು) ಎಂಬ ಹೆಸರಿನ ಈತನ ಒಂದು ಕವನ ಸಂಕಲನವೇ ಪ್ರಕಟವಾಗಿದೆ. ಆ ಪದ್ಯಜಾತಿಗೇ ಮುತ್ತಿನಸರವೆಂದು ಕವಿ ಹೆಸರು ಕೊಟ್ಟಿದ್ದಾನೆ. ಅಪ್ಪಾರಾವ್ ಎಂದೂ ತಾನು ನವ್ಯಸಾಹಿತ್ಯದ ಪ್ರಾರಂಭಕರ್ತನೆಂದೂ ತಾನು ಮಹಾಸಾಹಿತಿಯೆಂದೂ ಗರ್ವಪಡಲಿಲ್ಲ. ಈತನಿಗೆ ಕವಿಯಶಸ್ಸಿಗಿಂತ ಸಂಘಸಂಸ್ಕರಣವೇ ಪ್ರಧಾನವಾಗಿತ್ತು. ಈತ ಸಂಘಸಂಸ್ಕರ್ತನೂ ಹೌದು. ಭಾಷಾ ಸಂಸ್ಕರ್ತನೂ ಹೌದು. ಕನ್ಯಾಶುಲ್ಕಂ ಕೃತಿಯ ರಚನೆಯಲ್ಲಿ ಈತನಿಗೆ ವಿಶೇಷವಾದ ಅಭಿವಿವೇಶ. ಅದರಲ್ಲಿ ಆತನ ವಿಡಂಬನಾಸ್ತ್ರ ಅಪ್ರತಿಹತವಾಗಿದೆ.

	ಅಪ್ಪಾರಾವ್ ಆರಂಭಿಸಿದ ವ್ಯಾವಹಾರಿಕ ಭಾಷಾವಾದವೂ ಈತನ ಭಾವ ಕವಿತ್ವವೂ ಪರಸ್ಪರ ಪೋಷಕವಾಗಿವೆ. ಇವುಗಳಿಂದ ಅಂದು ತೆಲಗು ಸಾಹಿತ್ಯ ಲೋಕದಲ್ಲಿ ಒಂದು ಹೊಸ ಚೈತನ್ಯವೇ ಹುಟ್ಟಿತು. ಆಮೇಲೆ ಬಂದ ಅನೇಕ ತೆಲಗು ಕವಿಗಳು ಈತ ಕಲ್ಪಿಸಿಕೊಂಡ ಹೊಸ ಛಂದಸ್ಸನ್ನೇ ಹೆಚ್ಚಾಗಿ ಅನುಸರಿಸಿದರು. ಈತನ ಕೃತಿಗಳ ಪ್ರಭಾವ ಆಮೇಲಿನ ತೆಲಗು ಸಾಹಿತ್ಯದ ಮೇಲೆ ವಿಶೇಷವಾಗಿ ಕಾಣುತ್ತದೆ.

	ಅಪ್ಪಾರಾವ್ 1887ರಿಂದ ಕೆಲವು ವರ್ಷಗಳ ಕಾಲ ಕಾಲೇಜು ಅಧ್ಯಾಪಕನಾಗಿದ್ದು ಶಿಕ್ಷಣಕ್ಷೇತ್ರದಲ್ಲಿಯೂ ಕೃಷಿ ಮಾಡಿದ. ಆಮೇಲೆ ಮಹಾರಾಜ ಆನಂದ ಗಜಪತಿರಾಯನ ಆಪ್ತಕಾರ್ಯದರ್ಶಿಯಾಗಿ ಕೆಲಸ ಮಾಡಿದ. ಇವನಿಗೆ ಚರಿತ್ರೆಯ ಸಂಶೋಧನೆಯಲ್ಲಿಯೂ ಸಂಗೀತ ನೃತ್ಯಾದಿಕಲೆಗಳಲ್ಲಿಯೂ ವಿಶೇಷವಾದ ಆಸಕ್ತಿಯಿತ್ತು. ರಾಜರ ಆಪ್ತಕಾರ್ಯದರ್ಶಿಯಾಗಿದ್ದಾಗ ಪದೇ ಪದೇ ಮದ್ರಾಸಿಗೆ ಹೋಗಿ ಬರುತ್ತಿದ್ದ ಅಪ್ಪಾರಾವ್ 1895ರಲ್ಲಿ ಶೇಷಗಿರಿಶಾಸ್ತ್ರಿಯವರ ಮನೆಯಲ್ಲಿ ನಡೆದ ಮೈಸೂರು ವೀಣೆ ಶೇಷಣ್ಣನವರ ಜಲತರಂಗ್ ವಾದನವನ್ನೂ ವೀಣಾ ವಾದನವನ್ನೂ ಕೇಳಿದುದಾಗಿ ತನ್ನ ದಿನಚರಿಯಲ್ಲಿ ಗುರುತಿಸಿದ್ದಾನೆ. ಬೆಂಗಳೂರಿಗೆ ಬಂದು ಸೆಂಟ್ರಲ್ ಕಾಲೇಜಿನ ಪ್ರೊ. ಟೇಟ್‍ನೊಡನೆ ಸಾಹಿತ್ಯ ವಿಮರ್ಶೆಯನ್ನು ಕುರಿತು ಚರ್ಚೆಮಾಡಿದನಂತೆ. ಅಪ್ಪಾರಾವ್ ಕನ್ನಡ ಭಾಷಾಸಾಹಿತ್ಯಗಳ ವಿಷಯದಲ್ಲಿಯೂ ಆಸಕ್ತಿ ಹೊಂದಿದ್ದು ಕನ್ನಡವನ್ನು ಕುರಿತು ಕೆಲವು ಲೇಖನಗಳನ್ನೂ ಬರೆದಿದ್ದಾನೆ.													   (ಕೆ.ಪಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ